ಯುವಾನ್ ಷಿಕಾಯ್
1850-1910. ಚೀನ ಗಣರಾಜ್ಯ ಪ್ರಥಮಾಧ್ಯಕ್ಷ. ಹೊನಾನಿನ ಬಡ ರೈತಕುಟುಂಬದಲ್ಲಿ ಜನಿಸಿದ (1859). 1880ರಲ್ಲಿ ಈತ ಸೇನೆಗೆ ಸೇರಿದ. ತೀಕ್ಷ್ಣ ಬುದ್ಧಿಕೌಶಲದಿಂದ ಉನ್ನತ ಪದವಿಗಳನ್ನು ಗಳಿಸಿದ. ಚೀನ, ಜಪಾನ್ ಸಮರದಲ್ಲಿ ಈತ ಕೊರಿಯಾದಲ್ಲಿ ಲಿಹುಂಗ ಚಾಂಗ್‍ನ ಪ್ರತಿನಿಧಿಯಾಗಿದ್ದ. ಚೀನದ ಪ್ರಗತಿ ಸೇನೆಯಿಂದ ಸಾಧ್ಯ ಎಂದು ಭಾವಿಸಿದ್ದ. ಈತ ಚೀನದ ಸೇನೆಯಲ್ಲಿ ಹಲವು ಸುಧಾರಣೆಗಳನ್ನು ಕೈಗೊಂಡ. ಚೀನದ ಚಂಗ್ ರಾಜವಂಶ ಆಡಳಿತಕಾಲದಲ್ಲಿ ಅತ್ಯುನ್ನತ ಸೇನಾಧಿಕಾರಿಯಾಗಿದ್ದ ಈತ ಸಾಮ್ರಾಟ್ ಕ್ವಾಂಗ್ ಡ್ಯೂವಿರುದ್ಧ ಡಾಗಾರ್ ಸಾಮ್ರಾಜ್ಞಿ ತ್ಸುಹ್ಸಿಗೆ ಬೆಂಬಲನೀಡಿದ. ಕಡೆಗೆ ಚೀನದಲ್ಲಿ ಆಳರಸರ ಆಡಳಿತ ಕೊನೆಗೊಳ್ಳಲು ಕಾರಣಪುರುಷನಾದ. 1912ರಲ್ಲಿ ಸುನ್‍ಯಾತ್ ಸೆನ್‍ರ ಬದಲು ಚೀನ ಗಣರಾಜ್ಯದ ಅಧ್ಯಕ್ಷರಾಗಿ ಆಯ್ಕೆಗೊಂಡು ನಾಲ್ಕು ವರ್ಷಗಳ ಕಾಲ ಆಡಳಿತ ನಡೆಸಿದ. 1914ರಲ್ಲಿ ತನ್ನ ವಿರೋಧಿಗಳನ್ನು ಬಗ್ಗು ಬಡಿದ. ಪಾರ್ಲಿಮೆಂಟ್ ವಿಸರ್ಜಿಸಿ ಸರ್ವಾಧಿಕಾರಿಯಾದ. ಅತ್ಯಂತ ಮಹತ್ತ್ವಾಕಾಂಕ್ಷಿಯಾದ ಯುವಾನ್ 1915ರಲ್ಲಿ ತಾನೇ ಚೀನದ ಸಾಮ್ರಾಟನೆಂದು ಘೋಷಿಸಿಕೊಂಡ. ಆದರೆ ಸಿಂಹಾಸನವೇರುವ ಮೊದಲೇ ನಿಧನಹೊಂದಿದ. (1916).		                       
 (ಕೆ.ಎನ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ